ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ವೇಗದ ಬೌಲರ್‌ಗಳು ಬಿಗುವಿನ ದಾಳಿ ನಡೆಸಿದ್ದಾರೆ. ಶುಕ್ರವಾರ ನಡೆದ ಎರಡನೇ ದಿನದಾಟದಲ್ಲಿ ಟೀಮ್ ಇಂಡಿಯಾದ ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣಾ ತಲಾ 4 ವಿಕೆಟ್ ಪಡೆದು ಇಂಗ್ಲೆಂಡ್ ತಂಡವನ್ನು ಅಲ್ಪ ಮುನ್ನಡೆಗೆ ತಡೆದಿದ್ದಾರೆ. ಸಿರಾಜ್ ಸೀ ಸರಣಿಯಲ್ಲಿ ಅಮೋಘ ದಾಳಿ ನಡೆಸುತ್ತಿದ್ದಾರೆ. ಈ ಮೂಲಕ ಇವರು ಹಲವು ದಾಖಲೆಗಳಿಗೆ ಭಾಜನರಾಗಿದ್ದಾರೆ. ಶುಕ್ರವಾರವೂ ನಾಲ್ಕು ವಿಕೆಟ್ ಪಡೆಯುವ ಮೂಲಕ ಸಿರಾಜ್ ದಾಖಲೆ ಬರೆದಿದ್ದಾರೆ.
ಈ ಪಂದ್ಯದಲ್ಲಿ 1 ವಿಕೆಟ್ ಪಡೆಯುತ್ತಲೇ ಸಿರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ 200 ವಿಕೆಟ್‌ಗಳನ್ನು ಪೂರ್ಣಗೊಳಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಇದರೊಂದಿಗೆ ಈ ಸಾಧನೆ ಮಾಡಿದ ಭಾರತದ 25ನೇ ಕ್ರಿಕೆಟ್ ಆಟಗಾರರಾದರು. ಈ ಮೂಲಕ ಸಿರಾಜ್ ಟೀಮ್ ಇಂಡಿಯಾದ ದಿಗ್ಗಜ ಆಟಗಾರ ಸಚಿನ್ ತೆಂಡುಲ್ಕರ್, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಸಹ ಹಿಂದಿಕ್ಕಿದ್ದಾರೆ.
ಐದನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಸಿರಾಜ್ 86 ರನ್ ನೀಡಿ 4 ವಿಕೆಟ್ ಕಬಳಿಸಿದರು. ಇವರ ಮಾರಕ ದಾಳಿಯ ಪರಿಣಾಮ ಇಂಗ್ಲೆಂಡ್ 247 ರನ್‌ಗಳಿಗೆ ಅಲೌಟ್ ಆಯಿತು. ಈ ಮೂಲಕ ಸಿರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 203 ವಿಕೆಟ್ ಪಡೆದ ಸಾಧನೆಯನ್ನು ಮಾಡಿದ್ದಾರೆ. ಸಚಿನ್ ತೆಂಡುಲ್ಕರ್ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 664 ಪಂದ್ಯಗಳಲ್ಲಿ 201 ವಿಕೆಟ್ ಹಾಗೂ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 202 ವಿಕೆಟ್‌ಗಳನ್ನು ಪಡೆದಿದ್ದಾರೆ.
ಸಿರಾಜ್ ಸಾಧನೆ
ಸಿರಾಜ್ ಆಂಡರ್ಸನ್, ತೆಂಡುಲ್ಕರ್ ಸರಣಿಯಲ್ಲಿ ಮಾರಕ ದಾಳಿ ನಡೆಸುತ್ತಿದ್ದಾರೆ. ಇವರು ಬಿಗುವಿನ ದಾಳಿಯ ಪರಿಣಾಮ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು 18 ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆ ಸಹ ಇವರದ್ದಾಗಿದೆ. ಇನ್ನು ಸಿರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 200 ವಿಕೆಟ್ ಪಡೆದ 14ನೇ ಭಾರತದ ವೇಗದ ಬೌಲರ್ ಆಗಿದ್ದಾರೆ. ಇವರು 2017ರಲ್ಲಿ ಪದಾರ್ಪಣೆ ಮಾಡಿದರು. ಈ ವರೆಗೆ ಸಿರಾಜ್ ಟೆಸ್ಟ್‌ನಲ್ಲಿ 117, ಏಕದಿನ ಕ್ರಿಕೆಟ್‌ನಲ್ಲಿ 71, ಟಿ20 ಕ್ರಿಕೆಟ್‌ನಲ್ಲಿ 14 ವಿಕೆಟ್ ಪಡೆದಿದ್ದಾರೆ.
ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಈ ವೇಳೆ ಇಂಗ್ಲೆಂಡ್ ಹೆಡಿಂಗ್ಲಿ ಹಾಗೂ ಲಾರ್ಡ್ಸ್ ಪಂದ್ಯದಲ್ಲಿ ಜಯ ಸಾಧಿಸಿತ್ತು. ಇನ್ನು ಟೀಮ್ ಇಂಡಿಯಾ ಬರ್ಮಿಂಗ್‌ಹ್ಯಾಮ್‌ನಲ್ಲಿ ಗೆಲುವಿನ ನಗೆ ಬೀರಿತ್ತು. ಮ್ಯಾಂಚೆಸ್ಟರ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬ್ಯಾಟರ್‌ಗಳು ಅಮೋಘ ಪ್ರದರ್ಶನ ನೀಡಿದ್ದರಿಂದ ಈ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು. ಐದನೇ ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿಯನ್ನು ಟೀಮ್ ಇಂಡಿಯಾ ಸಮಬಲ ಸಾಧಿಸುವ ಪ್ಲ್ಯಾನ್ ಹಾಕಿಕೊಂಡಿದೆ. ಈ ಮೂಲಕ ಗಿಲ್ ಓವಲ್ ಅಂಗಳದಲ್ಲಿ ಇತಿಹಾಸ ನಿರ್ಮಿಸಲು ಸಿದ್ಧರಾಗಿದ್ದಾರೆ.

