ಪ್ರಧಾನಿ ಮೋದಿಯಿಂದ ಆಗಸ್ಟ್ 10 ರಂದು ಕರ್ನಾಟಕದಲ್ಲಿ ಮೂರು ವಂದೇ ಭಾರತ್ ರೈಲುಗಳಿಗೆ ಚಾಲನೆ

ಪ್ರಧಾನಿ ಮೋದಿಯಿಂದ ಆಗಸ್ಟ್ 10 ರಂದು ಕರ್ನಾಟಕದಲ್ಲಿ ಮೂರು ವಂದೇ ಭಾರತ್ ರೈಲುಗಳಿಗೆ ಚಾಲನೆ
ಆಗಸ್ಟ್ 10 ರಂದು ಪ್ರಧಾನಿ ಮೋದಿ ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ಅಂದು ಕರ್ನಾಟಕದ ಒಂದು ವಂದೇ ಭಾರತ್ ರೈಲು ಸೇರಿದಂತೆ ದೇಶದಲ್ಲಿ ಮೂರು ವಂದೇ ಭಾರತ್ ಹೊಸ ಟ್ರೇನ್ ಸಂಚಾರಕ್ಕೆ ಚಾಲನೆ ನೀಡುತ್ತಿದ್ದಾರೆ. ಜೊತೆಗೆ ಬೆಂಗಳೂರಿನ ಆರ್‌.ವಿ.ರಸ್ತೆಯಿಂದ ಬೊಮ್ಮಸಂದ್ರದವರೆಗೂ ಮೆಟ್ರೋ ರೈಲು ಓಡಾಟಕ್ಕೂ ಚಾಲನೆ ನೀಡುವರು.

ದೇಶದ ರೈಲ್ವೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೇ ಭಾನುವಾರ (ಆಗಸ್ಟ್ 10, 2025) ಕರ್ನಾಟಕ ಪ್ರವಾಸದ ಸಂದರ್ಭದಲ್ಲಿ ಮೂರು ಪ್ರಮುಖ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲುಗಳಿಗೆ ಹಸಿರು ನಿಶಾನೆ ತೋರಿಸಿ ಲೋಕಾರ್ಪಣೆ ಮಾಡಲಿದ್ದಾರೆ.
ಅವುಗಳಲ್ಲಿ ಪ್ರಮುಖವಾದದ್ದು ಬೆಂಗಳೂರು – ಬೆಳಗಾವಿ ಮಾರ್ಗದ ವೇಗದ ರೈಲು ಸೇವೆಯಾಗಿದೆ. ಇದರೊಂದಿಗೆ ನಾಗ್ಪುರದ ಅಜ್ನಿ-–ಪೂಣಾ ಹಾಗೂ ಅಮೃತಸರ-–ಶ್ರೀ ಮಾತಾ ವೈಷ್ಣವೋ ದೇವಿ ಕಟ್ರಾ ನಡುವೆಯೂ ನೂತನ ಸೇವೆ ಆರಂಭವಾಗಲಿದೆ.

ಸಚಿವ ಪ್ರಹ್ಲಾದ್ ಜೋಶಿ ಮನವಿಗೆ ಸ್ಪಂದನೆ:
ಈ ಹಿಂದೆ ನಾನು ಸಲ್ಲಿಸಿದ್ದ ಮನವಿಗೆ ಅನುಗುಣವಾಗಿ ಬೆಂಗಳೂರು – ಬೆಳಗಾವಿ ವಂದೇ ಭಾರತ್ ರೈಲು ಸೇವೆಗೆ ಅನುಮೋದನೆ ದೊರೆತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಈ ರೈಲು ಬೆಳಗಾವಿಯಿಂದ ಬೆಳಿಗ್ಗೆ 5.20ಕ್ಕೆ ಹೊರಟು, ಮಧ್ಯಾಹ್ನ 1.50ಕ್ಕೆ ಬೆಂಗಳೂರಿಗೆ ಆಗಮಿಸುತ್ತದೆ. ವಾಪಸ್‌ ಮಧ್ಯಾಹ್ನ 2.20ಕ್ಕೆ ಬೆಂಗಳೂರು ನಿಲ್ದಾಣದಿಂದ ಹೊರಟು, ರಾತ್ರಿ 10.40ಕ್ಕೆ ಬೆಳಗಾವಿಗೆ ತಲುಪಲಿದೆ. ಈ ಸೇವೆಯಿಂದಾಗಿ ಬೆಂಗಳೂರು, ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿ ನಡುವೆ ಅತಿ ವೇಗದ ಸಂಪರ್ಕ ಸಾಧ್ಯವಾಗಲಿದ್ದು, ಈ ಪ್ರದೇಶದ ರೈತರು, ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಉದ್ಯಮಿಗಳಿಗೆ ದೊಡ್ಡ ಮಟ್ಟದ ಪ್ರಯೋಜನ ದೊರೆಯಲಿದೆ.

ಈ ವಂದೇ ಭಾರತ್ ರೈಲುಗಳು ಅತ್ಯಾಧುನಿಕ ತಂತ್ರಜ್ಞಾನ, ಸುರಕ್ಷತೆ ಹಾಗೂ ವೇಗವನ್ನು ಒದಗಿಸುತ್ತಿದ್ದು, ಪ್ರಯಾಣಿಕರಿಗೆ ಹಿತ ಅನುಭವ ನೀಡಲಿವೆ. ಇದು ನವ ಭಾರತದ ತಾಂತ್ರಿಕ ಸಾಧನೆ ಹಾಗೂ ಲೋಕಪರ ಆಡಳಿತದ ಪರಿಪ್ರತಿಬಿಂಬವಾಗಿದೆ.
ಈ ಯೋಜನೆ ಯಶಸ್ವಿಯಾಗಿ ರೂಪುಗೊಳ್ಳಲು ಸಹಕಾರ ನೀಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರೈಲ್ವೇ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *