ಕರ್ನಾಟಕದ ಐವರು ವಿದ್ಯಾರ್ಥಿನಿಯರು ಚೆವನಿಂಗ್-ಕರ್ನಾಟಕ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಸರ್ಕಾರದಿಂದ ಮಹಿಳೆಯರನ್ನು ಈ ವಿದ್ಯಾರ್ಥಿವೇತನಕ್ಕೆ ಆಯ್ಕೆ ಮಾಡಲಾಗಿದೆ. ಸರ್ಕಾರಿ ಕಾಲೇಜುಗಳಿಂದ ಮಹಿಳಾ ಪದವೀಧರರನ್ನು ಪರಿಗಣಿಸುವ ಈ ವಿದ್ಯಾರ್ಥಿವೇತನವು ಮುಂದಿನ ಮೂರು ವರ್ಷಗಳವರೆಗೆ ಪ್ರತಿ ವರ್ಷ ಮುಂದುವರಿಯಲಿದ್ದು, ಒಟ್ಟು 15 ಮಹಿಳಾ ಪದವೀಧರರಿಗೆ ಪ್ರಯೋಜನವಾಗಲಿದೆ.

ಬೆಂಗಳೂರು, ಆಗಸ್ಟ್ 8: ಕರ್ನಾಟಕದ ಐವರು ಮಹಿಳೆಯರು ಚೆವೆನಿಂಗ್ ವಿದ್ಯಾರ್ಥಿವೇತನದ (Chevening-Karnataka scholarships) ಅಡಿಯಲ್ಲಿ ಇಂಗ್ಲೆಂಡ್ಗೆ (UK) ಪ್ರಯಾಣಿಸಲಿದ್ದಾರೆ. ಚೆವೆನಿಂಗ್-ಕರ್ನಾಟಕ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ 5 ಮಹಿಳಾ ವಿದ್ಯಾರ್ಥಿನಿಯರ ಮೊದಲ ಬ್ಯಾಚ್ ಸೆಪ್ಟೆಂಬರ್‌ನಲ್ಲಿ ತಮ್ಮ ಸ್ನಾತಕೋತ್ತರ ಪದವಿ ಪಡೆಯಲು ಯುಕೆಗೆ ತೆರಳಲಿದ್ದಾರೆ. ಕರ್ನಾಟಕದ ಮಹಿಳಾ ಪದವೀಧರರಿಗೆ ಯುಕೆಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಲು ಜಂಟಿ ವಿದ್ಯಾರ್ಥಿವೇತನವನ್ನು ಪ್ರಾರಂಭಿಸಲು ರಾಜ್ಯ ಸರ್ಕಾರವು 2024ರಲ್ಲಿ ಯುಕೆಯ ಚೆವೆನಿಂಗ್ ವಿದ್ಯಾರ್ಥಿವೇತನ ಕಾರ್ಯಕ್ರಮದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು.
ಚೆವೆನಿಂಗ್-ಕರ್ನಾಟಕ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ಐದು ಮಹಿಳಾ ವಿದ್ವಾಂಸರ ಮೊದಲ ಗುಂಪನ್ನು ಕರ್ನಾಟಕದ ರಾಜ್ಯ ಉನ್ನತ ಶಿಕ್ಷಣ ಮಂಡಳಿಯಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಘೋಷಿಸಲಾಯಿತು. ಕನ್ನಡಿಗರಾದ ನಿಹಾರಿಕಾ ನರೇಶ್, ಸುಷ್ಮಾ ಶ್ಯಾಮಸುಂದರ್, ಚಂದನಾ ಅಂಜಿನಪ್ಪ, ಅಥೇನಾ ರೋಸ್ ಜೋಸೆಫ್ ಮತ್ತು ಶ್ವೇತಾ ಎನ್. ಹೆಗ್ಡೆ ಈ ಸ್ಕಾಲರ್ಶಿಪ್ಗೆ ಆಯ್ಕೆಯಾಗಿದ್ದು, ಸೆಪ್ಟೆಂಬರ್‌ನಲ್ಲಿ ತಮ್ಮ ಸ್ನಾತಕೋತ್ತರ ವಿದ್ಯಾರ್ಥಿವೇತನಕ್ಕಾಗಿ ಯುಕೆಗೆ ತೆರಳಲಿದ್ದಾರೆ.
ಕರ್ನಾಟಕ ಸರ್ಕಾರವು 2024ರಲ್ಲಿ ಯುಕೆಯ ಚೆವೆನಿಂಗ್ ವಿದ್ಯಾರ್ಥಿವೇತನ ಕಾರ್ಯಕ್ರಮದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು, ಇದು ಕರ್ನಾಟಕದ ಐದು ಮಹಿಳಾ ಪದವೀಧರರಿಗೆ ಯುಕೆಯಲ್ಲಿ ಸ್ನಾತಕೋತ್ತರ ಪದವಿಗಾಗಿ ಅಧ್ಯಯನ ಮಾಡಲು ಸಂಪೂರ್ಣವಾಗಿ ಹಣಕಾಸು ಒದಗಿಸುತ್ತದೆ. ಕರ್ನಾಟಕ ಸರ್ಕಾರ ಮತ್ತು ಚೆವನಿಂಗ್ ಎರಡೂ ಸಮಾನವಾಗಿ ಈ ವೆಚ್ಚವನ್ನು ಭರಿಸಲಿದೆ. ಒಬ್ಬೊಬ್ಬ ವಿದ್ಯಾರ್ಥಿನಿಗೆ 40 ಲಕ್ಷ ರೂ. ಸ್ಕಾಲರ್ಶಿಪ್ ನೀಡಲಾಗುವುದು.
ಚೆವೆನಿಂಗ್-ಕರ್ನಾಟಕ ವಿದ್ಯಾರ್ಥಿವೇತನವು ಯುಕೆ ಮತ್ತು ಕರ್ನಾಟಕ ಸರ್ಕಾರಗಳು ನೀಡುವ ಜಂಟಿ ವಿದ್ಯಾರ್ಥಿವೇತನವಾಗಿದ್ದು, ಮುಂದಿನ 3 ವರ್ಷಗಳ ಕಾಲ ಯಾವುದೇ ಯುಕೆ ವಿಶ್ವವಿದ್ಯಾಲಯದಲ್ಲಿ ಯಾವುದೇ ಸ್ನಾತಕೋತ್ತರ ಕಾರ್ಯಕ್ರಮವನ್ನು ಮುಂದುವರಿಸಲು ಐದು ಮಹಿಳಾ ಪದವೀಧರರಿಗೆ, ಅದರಲ್ಲೂ ಸರ್ಕಾರಿ ಕಾಲೇಜುಗಳಿಂದ ಬಂದವರಿಗೆ ಪ್ರತಿ ವರ್ಷ ಸಂಪೂರ್ಣವಾಗಿ ಹಣಕಾಸು ಒದಗಿಸುತ್ತದೆ. ಕರ್ನಾಟಕದಿಂದ 1,827 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 155 ಅರ್ಜಿಗಳನ್ನು ಅಂತಿಮಗೊಳಿಸಲಾಗಿತ್ತು. ಅದರಲ್ಲಿ 20 ಮಂದಿಯನ್ನು ಸಂದರ್ಶನಕ್ಕೆ ಆಯ್ಕೆ ಮಾಡಲಾಗಿತ್ತು. ಅವರಲ್ಲಿ ಐವರನ್ನು ಆಯ್ಕೆ ಮಾಡಲಾಗಿದೆ.

